Friday 29 October 2021

ಲೇಖನ : ಸಿಹಿತಿನಿಸುಗಳ ಸವಿಯುವಾಗ ಗಮನಹರಿಸಿರಿ

 

Source Images




ಲೇಖನ : ಸಿಹಿತಿನಿಸುಗಳ ಸವಿಯುವಾಗ ಗಮನಹರಿಸಿರಿ

ಲೇಖಕಿ ಸಿಂಧು ಭಾರ್ಗವ ಬೆಂಗಳೂರು.

ಸಿಹಿ ಹಾಗು ಸಿಹಿತಿಂಡಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಚಾಕಲೇಟ್, ಡೈರಿಮಿಲ್ಕ್ ಗಳನ್ನು ಕೈತುಂಬಾ ತುಂಬಿಸಿಕೊಂಡು ತಿನ್ನುತ್ತಾರೆ. ಜಾಮೂನು ಕಂಡರೆ ಮೂರ್ನಾಲ್ಕು ಒಂದೇ ಉಸಿರಿಗೆ "ಗುಳುಂ" ಮಾಡುವವರೂ ಇದ್ದಾರೆ. ಹಬ್ಬ ಹರಿದಿನಗಳಲ್ಲಿ ಸಿಹಿಖಾದ್ಯಗಳ ಗಮ್ಮತ್ತೇ ಬೇರೆ. ಮದುವೆ ಸಮಾರಂಭದಲ್ಲಿ,  ಹಬ್ಬದ ಸಂದರ್ಭಗಳಲ್ಲಿ ತನ್ನತ್ತ ಸೆಳೆಯುತ ಬಾಣಸಿಗರನ್ನು ಹೊಗಳಲು ಮೊದಲ ಸ್ಥಾನ ಪಡೆಯುವುದು ಈ ಸಿಹಿ ಖಾದ್ಯಗಳು.

ಅದರಲ್ಲಿ ಮೊದಲನೆಯದಾಗಿ ವಿವಿಧ ರೀತಿಯ ಪಾಯಸಗಳು. ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ತಾಯಿ ಹತ್ತಾರು ಬಗೆಯ ಅಡುಗೆ ಮಾಡುವಾಗ ಪಾಯಸವನ್ನು ಮಾಡಿಯೇ ಮಾಡುತ್ತಾರೆ. ಸುಲಭವಾಗಿ ಹೆಸರುಬೇಳೆ ಪಾಯಸ, ಶಾವಿಗೆ ಪಾಯಸ(ಕೀರು) ಮಾಡಬಹುದು. ದ್ರಾಕ್ಷಿ ಗೋಡಂಬಿ ಬಾದಾಮಿ, ದಪ್ಪ ಹಾಲು ಬೆರೆಸಿ ಪಾಯಸ ಮಾಡಿದರೆ ಆಹಾ!! ಎಂತ ರುಚಿ. ಮನೆಮಂದಿಯೆಲ್ಲರೂ ಬಾಯಿ ಚಪ್ಪರಿಸಿ ಸವಿಯುತ್ತಾರೆ. ಆದರೆ ಮಕ್ಕಳು "ಬೇಡ" ಎಂದು ಹೇಳುವುದೇ ಜಾಸ್ತಿ. ಮುದ್ದು ಮಾಡಿ ಒಂದು ಸೌಟು ಪಾಯಸ ಹಾಕಿಕೊಳ್ಳುವಂತೆ ಒತ್ತಾಯ ಮಾಡುತ್ತಾರೆ. ಕಷ್ಟದಲ್ಲಿ ಮುಖ ಸಿಂಡರಿಸಿಕೊಂಡು ಹೇಗೋ ತಿಂದು ಮುಗಿಸುತ್ತಾರೆ ಬಿಡಿ.

ಕೆಲವರಿಗೆ ಸಿಹಿ ಎಂದರೆ ತುಂಬಾ ಇಷ್ಟ. ಹಾಲು ಪರಮ್ಮಾನ್ನ, ಗೋದಿಕಡಿ ಪಾಯಸ, ಅವಲಕ್ಕಿ ಪಾಯಸ, ಕಡಲೆಬೇಳೆ ಪಾಯಸ ಎಂದರೆ ಅಚ್ಚುಮೆಚ್ಚು. ಅದಕ್ಕೆ ಒಣಹಣ್ಣುಗಳ ಬೆರೆಸಿದಾಗ ಬಿಸಿ ಬಿಸಿಯ ಜೊತೆಗೆ ಘಮವೂ ಮೂಗಿಗೆ ಬಡಿಯುತ್ತದೆ. ಹಾಗೆಯೇ ಬೆಲ್ಲ, ಕಾಯಿಹಾಲು ಬೆರೆಸಿ ಚೆನ್ನಾಗಿ ಕುದಿಸಿ ಮಾಡುವ ಪಾಯಸ ಬಾಯಲ್ಲಿ ನೀರೂರುವಂತೆ ಮಾಡುವುದು. ಎರಡು ಮೂರ ಸಲಿ ಹಾರಿಸಿಕೊಂಡು ಹೊಟ್ಟೆ ತುಂಬಾ ಸವಿಯುತ್ತಾರೆ. ಕಾಯಿಹಾಲು, ಬೆಲ್ಲದಿಂದ ಮಾಡಿದ ಪಾಯಸ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುತ್ತದೆ. ಹಾಗಾಗಿ ಆಗಾಗ್ಗೆ ಮಕ್ಕಳಿಗೆ ಮನೆಯಲ್ಲಿ ವಿಶೇಷ ಸಂದರ್ಭವಿಲ್ಲದಿದ್ದರೂ ವಾರಕ್ಕೊಮ್ಮೆ ಪಾಯಸ ಮಾಡಿ ಬಡಿಸಬೇಕು.

ಇನ್ನು ಪಾಯಸ ಮಾತ್ರವಲ್ಲದೇ ಕ್ಯಾರೆಟ್ ಹಲ್ವಾ, ಲಡ್ಡು, ಬರ್ಫಿ, ಅಕ್ಕಿ ಅಥವಾ ಗೋದಿ ಹಾಲುಬಾಯಿ, ಅಪ್ಪ, ಸಿಹಿಗುಂಬಳ ಕಡುಬು, ಮೈಸೂರು ಪಾಕ್, ಪೇಡ, ಡ್ರೈ ಜಾಮೂನು, ಅತಿರಸ, ಹೋಳಿಗೆ, ಚಿರೋಟಿ ಹೀಗೆ ಲಘು ಸಿಹಿ ಹೊಂದಿದ ಸಿಹಿಖಾದ್ಯಗಳನ್ನು ತಯಾರಿಸಿ ಸವಿಯಬಹುದು.

ಸಕ್ಕರೆ ಸೇವಿಸುವಾಗ ಎಚ್ಚರ ವಹಿಸಬೇಕು:

೧)ಬೆಲ್ಲದಿಂದ ತಯಾರಿಸಿದ ಸಿಹಿಖಾದ್ಯ ಆರೋಗ್ಯಕರ.
೨) ಸಕ್ಕರೆಯಿಂದ ತಯಾರಿಸಿದ ಸಿಹಿಖಾದ್ಯಗಳಿಂದ ಕೊಲೆಸ್ಟರಾಲ್‌ ಬರಬಹುದು. ಉದರದಲ್ಲಿ ಸಕ್ಕರೆ ಬೇಗನೆ ಕರಗುವುದಿಲ್ಲ.
೩) ಸಕ್ಕರೆ, ಉಪ್ಪು, ರವೆ, ಬಿಳಿಅಕ್ಕಿ, ಮೈದಾ ಬಿಳಿವಿಷ (ವೈಟ್ ಪಾಯಿಸನ್) ವಿಭಾಗಕ್ಕೆ ಸೇರುತ್ತದೆ.
೪) ಮುಂಜಾನೆಯ ಚಹಾಗೆ ಕೂಡ ಕಡಿಮೆ ಸಕ್ಕರೆ ಬಳಸಿ ಅಥವಾ ಸಕ್ಕರೆ ಇಲ್ಲದೆ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು.
೫) ದಿನದಲ್ಲಿ ಸಕ್ಕರೆ ಬಳಸುವ ಪ್ರಮಾಣ ಕಡಿಮೆಮಾಡಬೇಕು. ಶುಗರ್ (ಮಧುಮೇಹ) ಬಂದರೇನೆ ಸಕ್ಕರೆ ತಿನ್ನುವುದು ಬಿಡಬೇಕೆಂದಿಲ್ಲ. ಪೂರ್ವದಿಂದಲೇ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
೬) ಸಕ್ಕರೆಗಿಂತ ಕಲ್ಲುಸಕ್ಕರೆ, ಕೆಂಪು ಕಲ್ಲು ಸಕ್ಕರೆ ತುಂಬಾ ಒಳ್ಳೆಯದು.
೭) ಮಕ್ಕಳಿಗೆ ಕಲ್ಲುಸಕ್ಕರೆ ವಿಳ್ಯದೆಲೆ ಜೊತೆಗೆ ಜಜ್ಜಿ ತಿನ್ನಿಸಿದರೆ ಕಫ ಕಡಿಮೆಯಾಗುವುದು.
೮) ಕಲ್ಲುಸಕ್ಕರೆಯನ್ನು ಸಿಹಿ ತಿಂಡಿ ತಯಾರಿಸುವಲ್ಲಿ ಬಳಸಬಹುದು.
೯) ಮದುಮೇಹಿಗಳು ಸಕ್ಕರೆ ಸೇವಿಸುವುದನ್ನು ನಿಲ್ಲಿಸಿ ಮುಂಜಾನೆ ಸಪ್ಪೆ ಚಹಾ ಸವಿಯುವಾಗ ಒಣ ಖರ್ಜೂರವನ್ನು ತಿನ್ನಬಹುದು.
೧೦) ಮಕ್ಕಳಿಗೆ ಚಾಕಲೇಟ್, ಕ್ಯಾಂಡಿ ಕೊಡಲೇಬಾರದು. ಹಲ್ಲುಗಳ ಸಂದಿಯಲ್ಲಿ ಸಿಕ್ಕಿ ಹುಳುಕು ಹಲ್ಲು ಸಮಸ್ಯೆ ಬರುತ್ತದೆ. ಸರಿಯಾಗಿ ಹಲ್ಲು ಉಜ್ಜಲು ಹೇಳಬೇಕು.
೧೧) ಸಕ್ಕರೆ ಬದಲಿಗೆ ಜೇನುತುಪ್ಪ, ಹಣ್ಣಿನ ರಸಗಳನ್ನು ಬಳಸಬಹುದು. ಅವು ನೈಸರ್ಗಿಕ ಸಿಹಿಯನ್ನು ಹೊಂದಿರುತ್ತವೆ.
೧೨) ಇನ್ನೊಂದು ಗಮನಿಸಲೇ ಬೇಕಾದ ಅಂಶವೇನೆಂದರೆ, ಸಿಹಿತಿಂಡಿಗಳ ತಂದು ಫ್ರಿಡ್ಜ್  ನಲ್ಲಿ ಇಡಬಾರದು.
೧೩) ಇನ್ನು ಐಸ್ ಕ್ರೀಂ ನಲ್ಲಿ ಸಕ್ಕರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅದು ಕೂಡ ಆರೋಗ್ಯಕ್ಕೆ ಹಾನಿಕಾರಕ.
೧೪) ಅಯ್ಯೋ!! ಸಿಹಿತಿಂಡಿ, ಯಾರೂ ತಿನ್ನದೇ ಉಳಿಯಿತಲ್ಲ, ಎಂದು ಮನೆಯಲ್ಲಿ ತಾಯಿ ಅಥವಾ ಮಕ್ಕಳಿಗೆ ನೀಡಿ ಹತ್ತು ಹದಿನೈದು ದಿನಗಳ ಹಳೆಯ ಸಿಹಿತಿಂಡಿಗಳ ತಿನ್ನುವವರೂ ಇದ್ದಾರೆ. ಹಾಗೆ ಮಾಡಿದರೆ ತಾಜಾ ರಹಿತ, ಗಟ್ಟಿಯಾದ, ಹೆರೆ ಕಟ್ಟಿದ ಸಕ್ಕರೆ, ಹಳೆಯ ರಿಫೈಂಡ್ ಆಯಿಲ್, ನಿಮ್ಮ ಉದರವನ್ನು ಸೇರಿದರೆ ಜೀರ್ಣವಾಗದೇ ಅಜೀರ್ಣವಾಗಬಹುದು. ಕಫ ಉಂಟಾಗುತ್ತದೆ.
೧೫) ಬೇಕರಿಗಳಲ್ಲಿ‌ ಗಾಜಿನ ಡಬ್ಬಗಳಲ್ಲಿ ಸಂಗ್ರಹಿಸಿಟ್ಟ ಸಿಹಿತಿಂಡಿಗಳನ್ನು ಖರೀದಿಸುವಾಗಲೂ ಎಚ್ಚರಿಕೆವಹಿಸಿರಿ.

ಹೀಗೆ ಹೆಚ್ಚಾಗಿ ಸಕ್ಕರೆಯಿಂದಲೇ ತಯಾರಿಸುವ ಸಿಹಿತಿಂಡಿಗಳಿಂದ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಪರಿಣಾಮ ಬೀರುತ್ತದೆ. ಬಾಯಿಗೆ ರುಚಿ ನೀಡಿದರೂ ಬಹಳ ಎಚ್ಚರವಹಿಸಿ ಸೇವಿಸಬೇಕು.



No comments:

Post a Comment